ಬಿಂದುಸಾರ
ಕ್ರಿ.ಪೂ.ಸು. 300-273. ಚಂದ್ರಗುಪ್ತ ಮೌರ್ಯನ ಮಗ ಹಾಗೂ ಉತ್ತರಾಧಿಕಾರಿ. ತಂದೆಯಿಂದ ಬಂದ ರಾಜ್ಯವನ್ನು ಸಂರಕ್ಷಿಸಿಕೊಂಡ ಈತ ದಕ್ಷಿಣ ಭಾರತದ ಕೆಲವು ಪ್ರದೇಶಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದನೆಂದು ಅಭಿಪ್ರಾಯವಿದೆ. ಗ್ರೀಕ್‍ಚರಿತ್ರಕಾರರು ಈತನನ್ನು ಅಮಿತ್ರಘಾತನೆಂದು ಕರೆದಿದ್ದಾರೆ. ಜೈನ ರಾಜಾವಳೀ ಕಥೆಗಳಲ್ಲಿ ಈತನನ್ನು ಸಿಂಹಸೇನನೆಂದು ಉಲ್ಲೇಖಿಸಲಾಗಿದೆ. ದೀಪವಂಶ ಮತ್ತು ಮಹಾವಂಶ ಬೌದ್ಧ ಗ್ರಂಥಗಳು ಈತನ ಹದಿನಾರು ಜನ ರಾಣಿಯರಲ್ಲಿ ನೂರೊಂದು ಗಂಡುಮಕ್ಕಳು ಜನಿಸಿದರೆಂದು ತಿಳಿಸುತ್ತವೆ. ಆದರೆ ಈ ಮಕ್ಕಳಲ್ಲಿ ಮೂವರ ಹೆಸರುಗಳು ಮಾತ್ರ ಲಭಿಸಿವೆ. ಸುಸೀಮ, ವಿಗತಶೋಕ ಹಾಗೂ ಅಶೋಕ. ಬಿಂದುಸಾರನ ಪಟ್ಟ ಮಹಿಷಿ ಧರ್ಮಾ ಎಂಬವಳಿಂದ ಅಶೋಕ ಜನಿಸಿದನೆಂದು ದೀಪವಂಶ ಮತ್ತು ಮಹಾವಂಶ ಗ್ರಂಥಗಳಿಂದ ತಿಳಿದುಬಂದರೆ ಬೇರೆ ಕೆಲವು ಗ್ರಂಥಗಳ ಪ್ರಕಾರ ಅಶೋಕ ಬಿಂದುಸಾರನ ಗ್ರೀಕ್ ಪತ್ನಿಯಿಂದ ಜನಿಸಿದವನೆಂದೂ ಹೇಳಲಾಗಿದೆ. 

ತಕ್ಷ ಶಿಲೆಯಲ್ಲಿ ಎದ್ದ ದಂಗೆಯನ್ನು ಅಡಗಿಸಲು ಬಿಂದುಸಾರ ಅಶೋಕನನ್ನು ಕುಮಾರಾಮಾತ್ಯನಾಗಿ ನೇಮಿಸಿ ಅಲ್ಲಿಗೆ ಕಳಿಸಿದನೆಂದು ದಿವ್ಯಾವದಾನದಿಂದ ತಿಳಿದು ಬರುತ್ತದೆ. ಅಶೋಕ ತನ್ನ ಕೆಲಸದಲ್ಲಿ ಯಶಸ್ವಿಯಾದ. ಬಿಂದುಸಾರನಿಗೆ ಗ್ರೀಕ್‍ರೊಡನೆ ಸುಮಧುರ ಬಾಂಧವ್ಯವಿತ್ತು. ಈತನ ಆಸ್ಥಾನದಲ್ಲಿ ಡೆಮಾಕೋಸ್ ಎಂಬ ಗ್ರೀಕ್ ರಾಯಭಾರಿ ಇದ್ದ. ಸಿರಿಯದ ಅರಸನೊಂದಿಗೆ ಸ್ನೇಹ ಸಂಬಂಧವಿತ್ತೆಂದು ಅವರ ನಡುವಣ ಪತ್ರ ವ್ಯವಹಾರಗಳಿಂದ ವಿದಿತವಾಗುತ್ತದೆ.

ಆರ್ಯಮಂಜುಶ್ರೀ ಮೂಲಕಲ್ಪದ ಕರ್ತೃ ಮತ್ತು ಟಿಬೆಟ್ಟಿನ ಚರಿತ್ರಕಾರ ತಾರಾನಾಥನ ಪ್ರಕಾರ ಚಾಣಕ್ಯ ಈತನ ಕಾಲದಲ್ಲಿ ಮಹಾಮಂತ್ರಿಯಾಗಿದ್ದ. ಬಿಂದುಸಾರನ ಅನಂತರ ಆಶೋಕ ರಾಜನಾದ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ